ಪ್ರೆಸ್ಟಿಟೇರಿಯನ್ ಪಂಥ

	 ಪ್ರಾಟೆಸ್ಟಂಟ್ ಸಂಪ್ರದಾಯದಲ್ಲಿನ ಒಂದು ಒಳಪಂಥ. ಪ್ರೆಸ್ಬಟರುಗಳು ಎಂದರೆ ಹಿರಿಯರು ಧರ್ಮಸಭೆಯ ಆಡಳಿತವನ್ನು ನಿರ್ವಹಿಸುವುದು ಇಲ್ಲಿಯ ವೈಶಿಷ್ಟ್ಯ. ಧರ್ಮದರ್ಶನ, ವಿಧಿಗಳು, ಆಚಾರಗಳು ಮತ್ತು ಶಿಸ್ತಿನ ದೃಷ್ಟಿಯಲ್ಲಿ ಜಾನ್ ಕ್ಯಾಲ್ವಿನ್ ಆರಂಭಿಸಿದ ಮತ್ತು ಸಾಮಾನ್ಯವಾಗಿ ಸುಧಾರಿತ ಎನ್ನಲಾಗುವ ಪರಂಪರೆ ಇಲ್ಲಿ ಸೂಚಿತವಾಗಿದೆ. ಧರ್ಮಾಧ್ಯಕ್ಷರೆ ಸರ್ವಾಧಿಕಾರ ನಡೆಸುವುದು ಮತ್ತು ಧರ್ಮಸಭೆಯ ಸದಸ್ಯರೆಲ್ಲ ಸಮಾನ ಅಧಿಕಾರವನ್ನು ಪಡೆದಿರುವುದು ಇವೆರಡೂ ವ್ಯವಸ್ಥೆಗಳ ನಡುವಿನ ಒಂದು ವ್ಯವಸ್ಥೆಗೆ ಬೈಬಲಿನ ಆಧಾರವನ್ನು ಕೊಡುವ ಪ್ರಯತ್ನವನ್ನು ಕ್ಯಾಲ್ವಿನ್ ಮಾಡಿದ್ದ.

	ಇಂದು ಪ್ರಪಂಚದಲ್ಲಿ ಸುಮಾರು 50 ದಶಲಕ್ಷ ಕ್ರೈಸ್ತರು ಪ್ರೆಸ್ಟಿಟೇರಿಯನ್ ಪಂಥದವರು. ಅಮೆರಿಕ ಸ್ಕಾಟಲೆಂಡ್, ಉತ್ತರ ಐರ್ಲೆಂಡ್, ನೆದರ್‍ಲೆಂಡ್ಸ್ ಜರ್ಮನಿ, ಸ್ವಿಟ್ಸರ್‍ಲೆಂಡ್ ಮತ್ತು ಪ್ರಾನ್ಸ್‍ಗಳಲ್ಲಿ ಇವರು ಅಧಿಕ ಸಂಖ್ಯೆಯಲ್ಲಿದ್ದಾರೆ. ವಲ್ರ್ಡ್‍ಪ್ರೆಸ್ಬಿಟೇರಿಯನ್ ಲೈಯನ್ಸ್ ಎಲ್ಲ ಪ್ರೆಸ್ಟಿಟೇರಿಯನ್ ಧರ್ಮಸಭೆಗಳ ಒಕ್ಕೂಟವಾಗಿದೆ. ಯೇಸುಕ್ರಿಸ್ತ ಪ್ರಭುವೂ ರಕ್ಷಕನೂ ಎಂದೂ ಒಪ್ಪುವ, ಬೈಬಲಿನಲ್ಲಿದ್ದ ದೇವರ ವಾಕ್ಯದ ಪಾರಮ್ಯವನ್ನು ಸ್ವೀಕರಿಸುವ, ಸುಧಾರಿತ ಧರ್ಮಸಭೆಗಳ ಧರ್ಮಪ್ರಕಟಣೆಗಳನ್ನು ಸ್ಥೂಲವಾಗಿ ಅಂಗೀಕರಿಸುವ ಮತ್ತು ಪ್ರೆಸ್ಟಿಟೇರಿಯನ್ ಆಡಳಿತ ವ್ಯವಸ್ಥೆಯನ್ನು ಜಾರಿಯಲ್ಲಿ ತಂದಿರುವ ಧರ್ಮಸಭೆಗಳು ಈ ಒಕ್ಕೂಟದ ಸದಸ್ಯವರ್ಗ, ಧರ್ಮಪ್ರಚಾರ, ಇತರ ಪಂಥಗಳಿಗೆ ಸೇರಿದ ಧರ್ಮಸಭೆಗಳೊಡನೆ ಒಗ್ಗಟ್ಟನ್ನು ಸಾಧಿಸುವುದು, ಧಾರ್ಮಿಕ ಸ್ವಾತಂತ್ರ್ಯ, ಮಾನವೀಯ ಹಕ್ಕುಗಳಿಗಾಗಿ ಹೋರಾಡುವುದು-ಈ ಒಕ್ಕೂಟದ ಕೆಲವು ಮುಖ್ಯ ಕಾರ್ಯಗಳು.

	ಪ್ರೆಸ್ಟಿಟೇರಿಯನ್ ಪಂಥದ ಕೆಲವು ಮುಖ್ಯ ತತ್ತ್ವಗಳು ಹೀಗಿವೆ: ಕ್ರೈಸ್ತ ಧರ್ಮಸಭೆ ಆಧ್ಯಾತ್ಮಿಕ ಮಟ್ಟದಲ್ಲಿ ಒಂದಾಗಿದೆ. ಈ ಐಕ್ಯ ಆಡಳಿತ ಮಟ್ಟದಲ್ಲಿ ಅಥವಾ ಕಣ್ಣಿಗೆ ಕಾಣುವಂಥ ರೀತಿಯಲ್ಲಿಯೇ ಇರಬೇಕೆಂದಿಲ್ಲ. ಧರ್ಮಸಭೆಯಲ್ಲಿರುವ ಅಧಿಕಾರಿಗಳೆಲ್ಲರೂ ಸಮಾನರು, ಯಾರಿಗೂ ವಿಶೇಷವಾದ ದಿವ್ಯವಾದ ಅಧಿಕಾರವಿಲ್ಲ, ಕ್ರಿಸ್ತನ ಆಜ್ಞೆಗೆ ಅನುಸಾರವಾಗಿ ಧರ್ಮಪ್ರಚಾರವನ್ನು ಮಾಡತಕ್ಕದ್ದು, ಇದಕ್ಕೊಸ್ಕರ ಎಲ್ಲ ಕ್ರೈಸ್ತ ಧರ್ಮಸಭೆಗಳಲ್ಲಿ ಐಕ್ಯ ಇರತಕ್ಕದ್ದು. ಧರ್ಮಸಭೆಯೊಳಗಿರುವ ಅಧಿಕಾರ, ಸೇವಾಪದವಿಗಳು ಒಂದೇ ಒಂದು ಉದ್ದೇಶಕ್ಕೋಸ್ಕರ ಇರುವಂಥವು. ದೇವರ ವಾಕ್ಯದ ಸೇವೆ. ಈ ಸೇವೆಯನ್ನು ಬೋಧನೆ, ಧರ್ಮಸಭೆಯ ಸುವ್ಯವಸ್ಥಿತ ಜೀವನ ರೀತಿ, ಮಾದರಿಯಾಗಬಲ್ಲ ಭಕ್ತಿಜೀವನ ಮತ್ತು ಪ್ರಾರ್ಥನಾ ವಿಧಿಗಳಲ್ಲಿ ನಡೆಸತಕ್ಕದ್ದು.
 (ಇ.ಎನ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ